Sri Hanuman Temple-Chalkapur
ಶ್ರೀ ಕ್ಷೇತ್ರ ಶ್ರೀ ಹನುಮಾನ ದೇವಸ್ಥಾನ ಚಾಳಕಾಪೂರದ ಅದ್ಭುತ ಪೌರಾಣಿಕೆ ಮಹಿಮೆಯ ಸಂಕ್ಷಿಪ್ತ ಪರಿಚಯ

“ನೀರಿಲ್ಲದ ಬಾವಿಯಿಲ್ಲ, ಹನುಮನಿಲ್ಲದ ಊರಲ್ಲ” ಎಂಬ ಗಾದೆ ಅಕ್ಷರಶಃ ಸತ್ಯ. ಆದರೆ ಚಾಳಕಾಪೂರದ ಶ್ರೀ ಹನುಮಂತ ದೇವರು ಎಲ್ಲರಂತಲ್ಲ. ಇವನ ವಿಶೇಷತೆಯೇ ಬೇರೆ. ಏಕೆಂದರೆ, ಈ ದೇವಸ್ಥಾನದ ಮೂಲ ರಾಮಾಯಣದ ಕಥೆಗೆ ಸಂಬಂಧಿಸಿದ್ದು. ಹೇಗೆಂದರೆ, ರಾಮಾಯಣ ಕಾಲದಲ್ಲಿ ಈ ಕ್ಷೇತ್ರವು ಒಂದು ಕಾಡಾಗಿದ್ದು ಇಲ್ಲಿ ಚಾಳಿಕೆ ಮತ್ತು ಚಾಳಿಕಾಸುರ ಎಂಬ ರಾಕ್ಷಸ ದಂಪತಿಗಳು ವಾಸವಾಗಿದ್ದರು. ಚಾಳಿಕಾಸುರ ರಾಕ್ಷಸ ಪ್ರವೃತ್ತಿಯವನಾಗಿದ್ದನು. ಅವನ ಪತ್ನಿ ಚಾಳಿಕೆ/ಚಾಳಿಕಾದೇವಿ ಮಾತ್ರ ಹರ-ಹರಿಯನ್ನು ಅಭೇದ್ಯವಾಗಿ ನಂಬಿದ ಸನ್ನಡತೆಯ ಒಬ್ಬ ಮಹಾನ್ ಭಕ್ತೆಯಾಗಿದ್ದಳು.

ಸೀತಾನ್ವೇಷಣೆಯ ಸಮಯದಲ್ಲಿ ಶ್ರೀರಾಮ-ಲಕ್ಷ್ಮಣರು ಈ ಕ್ಷೇತ್ರದ ಮೂಲಕ ಹಾದು ಹೋಗುವಾಗ ಈ ದಂಪತಿಗಳ ಸಂಪರ್ಕವಾಗಿ ಅವರು ಚಾಳಿಕಾಸುರನ ದುಷ್ಕೃತ್ಯಕ್ಕೆ ಮರಣ ಶಿಕ್ಷೆಯನ್ನು ಹಾಗೂ ಚಾಳಿಕಾದೇವಿಯ ಸದ್ವರ್ತನೆ ಮತ್ತು ಭಕ್ತಿಗೆ ಮೆಚ್ಚಿ ವರವನ್ನು ನೀಡಲು ಮುಂದಾದರು. ಆಗ ಚಾಳಿಕಾದೇವೆಯು ಶ್ರೀರಾಮನ ಪುನರ್ ದರ್ಶನದ ವರ ಪಡೆಯುತ್ತಾಳೆ.

ರಾಮ-ರಾವಣರ ಯುದ್ಧದಲ್ಲಿ ರಾವಣಸುತ ಮೇಘನಾಥನ ಶಕ್ತಿ ಅಸ್ತ್ರದಿಂದ ಲಕ್ಷ್ಮಣನು ಮೂರ್ಛೆಹೋದಾಗ, ರಾಜವೈದ್ಯ ಸುಶೇಣರ ಸಲಹೆ ಮೇರೆಗೆ ಹನುಮಂತ ಕೈಲಾಸದಿಂದ ಸಂಜೀವಿನಿ ಸಸ್ಯವುಳ್ಳ ದ್ರೋಣಾಚಲ ಪರ್ವತ ಹೊತ್ತು ಆಕಾಶ ಮಾರ್ಗವಾಗಿ ಲಂಕೆಯೆಡೆಗೆ ಹಾರಿಹೋಗುತ್ತಿರುವಾಗ, ಅವನ ಕೈಯಿಂದ ದ್ರೋಣಾಚಲ ಪರ್ವತದ ಒಂದು ಚಿಕ್ಕ ಭಾಗ ಈ ಸುಕ್ಷೇತ್ರದಲ್ಲಿ ಬೀಳಲು ಅದುವೆ ಇಂದು ಇಲ್ಲಿ ಕಾಣುವ ಒಂದು ಗುಡ್ಡವಾಗಿದೆ. ಹೀಗಾಗಿ ಇದನ್ನು ಸಂಜೀವಿನಿ ಗುಡ್ಡವೆಂದು ಕರೆಯುವುದುಂಟು. ಭಕ್ತೆ ಚಳಿಕಾದೇವಿಯು ತನ್ನ ಪತಿಯ ದುರ್ಮರಣದ ನಂತರ ಈ ಸಂಜೀವಿನಿ ಗುಡ್ಡದಲ್ಲಿ ಗವಿಯೊಂದನ್ನು ಕೊರೆದುಕೊಂಡು ವಾಸವಾಗಿದ್ದಳು. ಈ ಗವಿಯನ್ನು ಈಗಲೂ ಪಾಳುಬಿದ್ದ ಸ್ಥಿತಿಯಲ್ಲಿ ಕಾಣಬಹುದು.

ರಾವಣವಧೆಯ ನಂತರ ಸೀತೆಯೊಂದಿಗೆ ಅಯೋಧ್ಯೆಗೆ ಮರಳಿದ ಶ್ರೀರಾಮ ತನ್ನ ಪರಮ ಭಕ್ತ ಶ್ರೀ ಹನುಮಂತನನ್ನು ಕರೆದು, ಹಿಂದಿನ ವೃತ್ತಾಂತವನ್ನರುಹಿ, ಚಾಳಿಕಾದೇವಿ ಇರುವ ಸಂಜೀವಿನಿ ಗುಡ್ಡಕ್ಕೆ ಕಳುಹಿಸಿ, ತಾನು(ರಾಮ) ಕೊಟ್ಟ ಮಾತಿನಂತೆ ಮತ್ತೆ ಅಲ್ಲಿಗೆ ಬರುವುದಾಗಿ ಚಾಳಿಕಾದೇವಿಗೆ ತಿಳಿಸಲು ಸೂಚಿಸುತ್ತಾನೆ. ಶ್ರೀರಾಮನ ಆಜ್ಞಾನುಸಾರ ಗುಡ್ಡಕ್ಕೆ ಬಂದ ರಾಮದೂತ ಶ್ರೀ ಹನುಮಂತನನ್ನು ಕಂಡು ಪರಮ ಹರ್ಷಿತಳಾದ ಚಾಳಿಕಾದೇವೆ, ಶ್ರೀ ಹನುಮಂತನನ್ನು ಶಕ್ತಿಪೂರ್ವಕ ಪೂಜಿಸಿ ಅನನ್ಯಭಾವದಿಂದ ಸ್ತುತಿಸಲು ಸಂತುಷ್ಟಗೊಂಡ ಹನುಮಂತ ಚಾಳಿಕಾದೇವಿಗೆ ವರ ಕೇಳೆನಲು ಅವಳು ಹನುಮಂತನಿಗೆ ‘ಶ್ರೀ ರಾಮ ಬರುವವರೆಗೆ ನೀವು ಇಲ್ಲಿಯೇ ಇರಬೇಕೆಂದು’ ಬೇಡಿಕೊಳ್ಳುತ್ತಾಳೆ. ವಚನದಲ್ಲಿ ಸಿಲುಕಿದ ಹನುಮಂತ ಶ್ರೀಕ್ಷೇತ್ರದಲ್ಲೇ ನೆಲೆಸುತ್ತಾನೆ.

ಇದನ್ನರಿತ ಶ್ರೀರಾಮನು ಶೀಘ್ರದಲ್ಲಿ ಸ್ವತಃ ಈ ಶ್ರೀಕ್ಷೇತ್ರಕ್ಕೆ ಬಂದು ಚಾಳಿಕಾದೇವಿಗೆ ದರುಶನ ಭಾಗ್ಯ ನೀಡಿ ಮುಕ್ತಿ ದಯಪಾಲಿಸಲು ಮುಂದಾದಾಗ, ಚಾಳಿಕಾದೇವಿ ಈ ಕ್ಷೇತ್ರದ ಜನರ ಉದ್ಧಾರಕ್ಕಾಗಿ ಶ್ರೀ ಹನುಮಂತ ದೇವರ ಒಂದು ದಿವ್ಯ ಜಾಗೃತಾಂಶ ಿಲ್ಲಿಯೇ ನೆಲೆಸಿರಬೇಕೆಂದು ಶ್ರೀ ರಾಮಾಂಜನೇಯರಲ್ಲಿ ಬೇಡಿಕೊಳ್ಳುತ್ತಾಳೆ. ಜಗತ್ಕಲ್ಯಾಣದ ಈ ಬೇಡಿಕೆಯನ್ನು ಶ್ರೀರಾಮ ಹನುಮರು ಸಂತೋಷದಿಂದ ಒಪ್ಪಿಕೊಂಡ ಕಾರಣ ಶ್ರೀ ಹನುಮಂತ ದೇವರ ಒಂದು ದಿವ್ಯ ಜಾಗೃತಾಂಶ ಈ ಶ್ರೀಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಿರುತ್ತದೆ. ಹೀಗಾಗಿ ಈ ಕ್ಷೇತ್ರವು ಚಾಳಿಕಾದೇವಿಯ ಹೆಸರಿನಿಂದ ಚಾಳಿಕಾಪೂರ/ಚಾಳಕಾಪೂರ ಶ್ರೀಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ನಂತರ ಚಾಳಿಕಾದೇವೆಯ ಅನುಯಾಯಿಗಳು ಶ್ರೀಮೂರ್ತಿಯ ಪೂಜೆ ಮಾಡಿಕೊಂಡಿರಲು, ಸುಮಾರು 3000 ವರ್ಷಗಳ ಹಿಂದೆ ಹೇಮಾಡಪಂತಿಯ ರಾಕ್ಷಸರು ಈ ದೇವರಿಗೆ(ಒಂದೇ ರಾತ್ರಿಯಲ್ಲಿ) ಕಲ್ಲಿನ ದೇಗುಲ(ಗರ್ಭಗುಡಿ) ಗೋಪುರರಹಿತವಾಗಿ ನಿರ್ಮಿಸಿದರು.
ನಂತರ ಸುಮಾರು 1000 ವರ್ಷಗಳ ಹಿಂದೆ ಕಲ್ಲಿನ ಮಂಟಪ, 300 ವರ್ಷಗಳ ಹಿಂದೆ ಗಚ್ಚಿನ ಮಂಟಪ, 150 ವರ್ಷಗಳ ಹಿಂದೆ ತಗಡಿನ ಮಂಟಪ, ಧರ್ಮಶಾಲೆಗಳು ಭಕ್ತಾದಿಗಳಿಂದ ನಿರ್ಮಾಣಗೊಂಡಿವೆ ಎಂದು ನಂಬಲಾಗಿದೆ. ಹೀಗೆ ದೇವಾಲಯದ ಕೆಲಸ ಹಂತ-ಹಂತದಲ್ಲಿ ವಿಸ್ಕೃತವಾಗಿ ಜರುಗುತ್ತಿದೆ.

17ನೇ ಶತಮಾನದ ಮಧ್ಯದಲ್ಲಿ, ದಕ್ಷಿಣದ ಸುಭೆದಾರನಾದ ಮೊಘಲ ರಾಜಕುಮಾರ ಶ್ರೀ ಔರಂಗಜೇಬನು, ಈ ಭಾಗದಲ್ಲಿ ಪ್ರವಾಸಿದಾಗ ಇಲ್ಲಿಯ ಜನರು ಈ ಹನುಮಂತ ಜೀವಂತ ದೇವರೆಂದು ತಿಳಿಸಲು, ಔರಂಗಜೇಬನು ಪರೀಕ್ಷಾರ್ಥವಾಗಿ ತನ್ನ ಖಡ್ಗದಿಂದ ಶ್ರೀ ಮೂರ್ತಿಯ ಮೇಲೆ ಎರಡು ಪ್ರಹಾರ ಮಾಡುತ್ತಾನೆ. ಆ ಪ್ರಹಾರಗಳು ಮೂರ್ತಿಯ ಅಭಯಹಸ್ತಕ್ಕೆ ತಗುಲಲು ಶ್ರೀಮೂರ್ತಿಯಿಂದ ಭೂಭೂಕ್ಕಾರ ಘರ್ಜನೆ ಹೊರಹೊಮ್ಮುವುದರೊಂದಿಗೆ ರತ್ಕ ಚಿಮ್ಮಿ ಬರಲು ಔರಂಗಜೇಬನು ಆಶ್ಚರ್ಯಗೊಂಡು, ಕ್ಷಮೆಯಾಚಿಸಿ, ಈ ದೇವರು ನಿಜವಾದ ಜಿಂದಾವಲಿ ಎಂದು ಒಪ್ಪಿಕೊಂಡನೆಂದು ಇಲ್ಲಿಯ ಪ್ರತೀತಿ. ಇದರ ಕುರುಹಾಗಿ ಶ್ರೀಮೂರ್ತಿ ಅಭಯ ಹಸ್ತದ ಕಿರುಬೆರಳು ಮತ್ತು ಹೆಬ್ಬೆರಳುಗಳ ಮೇಲೆ ಕತ್ತಿಯ ಗಾಯದ ಗುರುತನ್ನು ಈಗಲು ಕಾಣಬಹುದು.

ಸುಮಾರು 150 ವರ್ಷಗಳ ಹಿಂದೆ ಮಾಣಿಕನಗರದ(ಐದನೇ ದತ್ತಾವತಾರವೆಂದೆ ನಂಬಿದ) ಶ್ರೀ ಮಾಣಿಕ ಪ್ರಭೂಗಳು ಸುಮಾರು ತಿಂಗಳುಗಳ ಕಾಲ ಈ ದೇವಸ್ಥಾನದಲ್ಲಿ ನೆಲೆಸೆ ಇಲ್ಲಿ ಭಜನೆ-ಕೀರ್ತನೆಗಳನ್ನು ಕೈಗೊಳ್ಳುವ ಕೈಗೊಳ್ಳುವ ಮೂಲಕ ಈ ಕ್ಷೇತ್ರದ ಮಹಿಮೆಯನ್ನು ಜನಸಾಮಾನ್ಯರಲ್ಲಿ ಅರುಹಿದರು. ಪರಿಣಾಮವಾಗಿ ಇಂದಿಗೂ ಈ ದೇವಸ್ಥಾನದಲ್ಲಿ ಮಾಣಿಕಪ್ರಭು ವಿರಚಿತ ಶ್ರೀಹನುಮಂತ ದೇವರ ಭಜನೆಯನ್ನು ದಿನಾಲು ಹಾಡಲಾಗುತ್ತಿದೆ. 1948ರಲ್ಲಿ ಜರುಗಿದ ರಜಾಕಾರ ಚಳುವಳಿಯಲ್ಲಿ ಸಂದರ್ಭದಲ್ಲಿ ರಜಾಕಾರರ ವಿರುದ್ಧ ಶ್ರೀಕ್ಷೇತ್ರದಲ್ಲಿ ಜರುಗಿದ ಅನೇಕ ಪವಾಡಗಳನ್ನು ಪ್ರತ್ಯಕ್ಷ ಕಂಡ ಜನರು ಇಂದಿಗೂ ತಮ್ಮ ಅನುಭವಗಳನ್ನು ಹೇಳಲು ಸಿಗುತ್ತಾರೆ. ಭಕ್ತರ ಮನೋಬೇಡಿಕೆಗಳನ್ನು ಕಾಮಧೇನುವಿನಂತೆ ಈಡೇರಿಸುವ ಈ ಶ್ರೀಕ್ಷೇತ್ರದ ಭಕ್ತರು ಭಾಷಾತೀತ ಹಾಗೂ ಧರ್ಮಾತೀತವಾಗಿ ನಾಡಿನ ಉದ್ದಗಲಕ್ಕೂ ಬೆಳೆಯುತ್ತಿರುವುದೇ ಈ ಶ್ರೀಕ್ಷೇತ್ರದ ಒಂದು ಭಕ್ತಿಯ ಅಕ್ಷಯ ಸಂಪತ್ತು.
ಶ್ರೀ ಕ್ಷೇತ್ರದ ದರುಶನದ ಪಡೆಯುವುದೆ ಜೀವನದ ಒಂದೂ ಮಹಾಭಾಗ್ಯ ಹೆಚ್ಚಿನ ವಿವರಕ್ಕಾಗಿ ಶ್ರೀಕ್ಷೇತ್ರದ ಪರಿಚಯ ಪುಸ್ತಕ ನೋಡಬಹುದಾಗಿದೆ. ಸರ್ವರಿಗೂ ಶ್ರೀ ಹನುಮಂತ ದೇವರ ಕೃಪೆಯಿರಲಿ.